Scott Adams was a real one to the very end. Salute to a good man. Some banger quotes:
– If you spend all your time arguing with people who are nuts, you'll be exhausted and the nuts will still be nuts.
– I used to be stupid but I've turned that situation around 360 degrees.
— Thad (@walterwhitepill) January 13, 2026
January 2026
13 January 2026
ನಿಧಾನಕ್ಕೆ ಊರವರು, ಮನೆಯವರು ತನ್ನ ಅಸಾಮರ್ಥ್ಯದ ಬಗ್ಗೆ ಒಳಗೊಳಗೇ ಗೇಲಿ ಮಾಡಿಕೊಳ್ಳುತ್ತಿರುವುದು ಗುರುವನಿಗೂ ತಿಳಿಯತೊಡಗಿದೆ.
ಈಗೀಗ ಆತನಿಗೆ ಯಾವ ಬೇಟೆಯಾಡುವುದು ಕೂಡ ಅಸಂಭವವೆನಿಸತೊಡಗಿದೆ. ಯಾವ ಕಾಡು, ಕಾಡಿನ ಸೂಕ್ಷ್ಮ ಶಬ್ದಗಳು ಆತನನ್ನು ಬೇಟೆಯೆಡೆಗೆ ಒಯ್ಯುವ ಮಾರ್ಗದರ್ಶಿಗಳಾಗುತ್ತಿದ್ದವೋ, ಅವೇ ಇಂದು ಆತನ ಏಕಾಗ್ರತೆಗೆ ಅಡಚಣೆಗಳಂತೆ ಪರಿಣಮಿಸುತ್ತಿವೆ. ಒಂದು ಹಂತದಲ್ಲಂತೂ ಹತಾಶೆಯ ಪರಾಕಾಷ್ಠೆಗೆ ತಲುಪಿದವನಂತೆ ಗಾಳಿಯಲ್ಲಿ ಗುಂಡು ಬಿಟ್ಟು ಕಾಡಿನ ಸದ್ದಡಗಿಸಿಬಿಡುತ್ತಾನೆ.
ಇಂಥದ್ದೇ ಒಂದು ರಾತ್ರಿ ಮಧ್ಯದಲ್ಲಿ ಎಚ್ಚರವಾದವನಿಗೆ ಅಲ್ಲೆಲ್ಲೋ ಕಾಡು ಹಂದಿ ಸರಿದಾಡಿದ ಸದ್ದು ಕೇಳಿದೆ. ಆಗಲೇ ವಿಫಲ ಪ್ರಯತ್ನಗಳಿಂದ ಹತಾಶನಾಗಿರುವ ಆತ ಸಿಕ್ಕ ಅವಕಾಶ ಬಿಡಬಾರದೆಂದು ನಿಶ್ಚಯಿಸಿ ಮಧ್ಯ ರಾತ್ರಿಯಲ್ಲಿ ಕೋವಿ ಹಿಡಿದು ಹೊರಟೇ ಬಿಡುತ್ತಾನೆ. ಆಗೋ ಅಲ್ಲಿ ಏನೋ ಸರಿದಾಡಿದಂತೆ ಕಂಡು ಕೋವಿಯಲ್ಲಿ ಗುರಿಯಿಟ್ಟು ಕತ್ತಲೆಯಲ್ಲಿ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಗುಂಡು ಹಾರಿದ್ ಜಾಗಕ್ಕೆ ಬೆಳಕು ಹರಿಸಿ ನೋಡಿದವನು, ತೋರಿದ ದೃಶ್ಯಕ್ಕೆ ಅಲ್ಲೇ ಕುಸಿದು ಕುಳಿತಿದ್ದಾನೆ.
ಗುರುವನಲ್ಲಿ ಇಲ್ಲದಿದ್ದ ಶೂನ್ಯತೆಯನ್ನು ತಾನೇ ಸೃಷ್ಟಿಸಿ, ಅದರೊಳಗೆಯೇ ಆತನನ್ನು ಬೀಳಿಸಿದ ಮನ್ನಣೆ ಸಮಾಜಕ್ಕೆ ಸಿಗುತ್ತದೆ.
——
ಇದನ್ನು ಬರಿ ಒಂದು ಕಥೆಯಂತೆಯೇ ನೋಡಿ ಕೂಡ ಸವಿಯಬಹುದು. ಆದರೆ ಇದೆ ಕಥೆಯ ಮೂಲಕ ಸರಣಿಯ ನಿರ್ಮಾಪಕರು, ಕಣ್ಣಿಗೆ ತೋರುವುದನ್ನು ಮೀರಿ ಸಮಾಜವನ್ನು, ಹಾಗು ತನ್ನನ್ನು ವಿಮರ್ಶಿಸಿಕೊಳ್ಳುವಂತೆ ಪ್ರೇಕ್ಷಕನನ್ನು ಪ್ರೇರೇಪಿಸುತ್ತಾರೆ.
ಹಲವಾರು ಪ್ರಶ್ನೆಗಳು ಈ ಚಿತ್ರ ಕಥೆಯನ್ನು ನೋಡಿದವನ ಮನಸ್ಸಿನಲ್ಲಿ ಮೂಡುತ್ತವೆ.
ಮನುಷ್ಯ ಗುರುವನಂತೆ ಸ್ಥಾಯಿಯಾಗಿ ಜೀವನದಲ್ಲಿ ಸಂತೃಪ್ತಿ ಕಂಡುಕೊಳ್ಳಲು ಸಾಧ್ಯವೇ? ಪ್ರಕೃತಿಯನ್ನು ಅರಿತು, ಅದರೊಂದಿಗೆ ಸಹಬಾಳ್ವೆ ನಡೆಸುವ ಯಾವುದೇ ಮಹತ್ವಾಕಾಂಕ್ಷೆಯಿಲ್ಲದಂತೆ ಬದುಕುವುದು ಸಾಧ್ಯವಾದಲ್ಲಿ ಮನುಷ್ಯನ ಅರ್ಧದಷ್ಟು ಆಧುನಿಕ ಆವಿಷಕಾರಗಳ ಉದ್ದೇಶವೇ ಇಲ್ಲದಂತೆಯೇ. ಇನ್ನಷ್ಟು ಮತ್ತಷ್ಟು ವೇಗವಾಗಿ ಚಲಿಸುವ ಹಾರುವ ವಾಹನಗಳು, ರಸ್ತೆಗಳು, ಮಹಾ ನಗರಗಳು, ಕುಟಿಲ ವ್ಯವಸ್ಥೆಗಳು ಇವ್ಯಾವುದಕ್ಕೂ ಅವಕಾಶಗಳೇ, ಅವಶ್ಯಕತೆಗಳೇ ಇದ್ದಿರುತ್ತಿರಲಿಲ್ಲವೇನೋ.
ಹಾಗೆಯೇ ನಿರ್ಭರವಾಗಿ ಬದುಕುತ್ತಿದ್ದ ಗುರುವನನ್ನು ಕೂಡ ವ್ಯವಸ್ಥೆ ನಿಧಾನಕ್ಕೆ ಭ್ರಷ್ಟನನ್ನಾಗಿ ಮಾಡುತ್ತದೆ. ಕೋವಿಯ ನೆಪದಲ್ಲಿ.
ತಂತ್ರಜ್ಞಾನದ ಆಧಾರದಲ್ಲೇ ಬದುಕುತ್ತಿರಿವ ಹೊಸ ತಲೆಮಾರು ಗುರುವನ ಸ್ವಾಭಾವಿಕ ಜಾಣ್ಮೆಯನ್ನು, ಜ್ಞಾನವನ್ನು ಹೀಗೆಳೆಯುತ್ತದೆ. ತನ್ನ ಪಾಡಿಗೆ ತಾನು ಕಾಡಿನ ಮಧ್ಯೆ ಬದುಕುತ್ತಿದ್ದವ ನಾಡಿಗೆ ಕಾಲಿಟ್ಟ ಕ್ಷಣದಲ್ಲೇ, ಕಲಿತವರ ನಾಡು, ಜಾತಿ, ಅಂತಸ್ತುಗಳ ವಿವಿಧ ಸ್ಥರಗಳ ಮೂಲಕ ಪಕ್ಷಪಾತ ತೋರಿ ಆತನ ಸ್ಥೈರ್ಯವನ್ನು ಇನ್ನಷ್ಟು ಕೆಳ ನೂಕುತ್ತದೆ. ಸಂಭಾವಿತ ವ್ಯವಸ್ಥೆ, ಬೇಟೆಯಲ್ಲಿ ಆತನ ಭಾಗವಹಿಸುವಿಕೆಯನ್ನು ನಿರಾಕರಿಸುತ್ತದೆ, ಆತನನ್ನು ಮನೆಯ ಹೊರಗೆ ನಿಲ್ಲಿಸಿ ಮಾತನಾಡಿಸುತ್ತದೆ, ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತುಕೊಳ್ಳಲು ನಿರಾಕರಿಸುತ್ತದೆ, ಮನಸ್ಸಿನಲ್ಲೇ ಬೈದು ಕೋವಿಯನ್ನು ಹಸ್ತಾಂತರಿಸುತ್ತದೆ.
ಇದ್ದುದರಲ್ಲೇ ಸಂತ್ರಪ್ತಿಯಿಂದ ಬದುಕುತ್ತಿದ್ದ ಗುರುವನ ಮನಸ್ಸಿನಲ್ಲಿ ತನ್ನ ಬಗ್ಗೆಯೇ ಕೀಳರಿಮೆ ಹುಟ್ಟುವಂತೆ ಮಾಡುತ್ತದೆ.
ಇವೆಲ್ಲವುಗಳಿಂದ ಪಾರಾಗುವ ಏಕ ಮಾತ್ರ ಆಶಾ ಕಿರಣವಾಗಿ ಆತನಿಗೆ ಆ ಹಳೆಯ ಕೋವಿ ತೋರುತ್ತದೆ. ಕೋವಿಯೊಂದಿಗೆ ತನ್ನ ಕೌಶಲ ಬೆರೆಸಿ ಮಹಾ ಬೇಟೆಗಾರನಾಗುವುದೊಂದೇ ಸಮಾಜದ ದೃಷ್ಟಿಯಲ್ಲಿ ತಾನು ಮೇಲೇರಬಲ್ಲ ಮೆಟ್ಟಿಲಾಗಿ ತೋರುತ್ತದೆ. ಆಸ್ಥೆಯಿಂದ ಜೋಪಾನ ಮಾಡಿಕೊಂಡು ಬಂದ ಕೋವಿ ನಿಧಾನಕ್ಕೆ ಆತನ ಹೆಗಲನ್ನು, ಜೀವನವನ್ನು, ಕಾಡಿನ ಬಗೆಗಿನ ಜ್ಞಾನವನ್ನು ಸ್ವಲ್ಪ ಸ್ವಲ್ಪವೇ ಘಾಸಿಗೊಳಿಸುತ್ತಾ ಬರುತ್ತದೆ. ಆರೋಗ್ಯಕರವಾದ ದೇಹದ ಒಳಗೆ ನುಗ್ಗಿದ ವೈರಾಣುವಿನಂತೆ. ಹತಾಶನಾದ ಗುರುವನಿಗೆ ಆತನ ಪ್ರೀತಿಯ ಕಾಡು ಗುನುಗಿಸುವ ಶಬ್ದಗಳೇ ಕೊನೆಗೆ ತ್ರಾಸವಾಗಿ, ಬೇಟೆಗೆ ಅಡ್ಡಿಯಾಗಿ , ನೆಮ್ಮದಿಗೆ ಮುಳುವಾಗಿ ಭಾಸವಾಗುತ್ತದೆ.
———
ಸಂದೀಪ್ ಪಿ.ಎಸ್ ಹಾಗು ಸುಮಂತ್ ಭಟ್ ರಚಿಸಿರುವ ಕನ್ನಡದಲ್ಲಿ ಬಂದಿರುವ ವಿಶೇಷವಾದ ಕಥಾ ಸಂಕಲನ ‘ಏಕಂ’. ಕನ್ನಡದಲ್ಲಿ ಇಂತಹ ನಿಧಾನಕ್ಕೆ ಮನಸ್ಸಿನೊಳಕ್ಕೆ ಇಳಿಯುವ ಕಥೆಗಳನ್ನು ಮೆಚ್ಚುವ ಪ್ರೇಕ್ಷಕರು ಇಲ್ಲವೆಂದಲ್ಲ. ಆದರೆ ಜನರನ್ನು ತಲುಪಿಸುವಂತೆ ಮಾಡಲು ನಾವು ಅವಲಂಬಿಸಿರುವ ತಂತ್ರಜ್ಞಾನ ನಿಂತಿರುವುದೇ ಕೆಲವು ಕ್ರಮಾವಳಿ (algorithm) ಮೇಲೆ. ಈ ಕ್ರಮವಾಳಿಗಳ ಏಕೈಕ ಉದ್ದೇಶ ಆರ್ಥಿಕ ಲಾಭ. ಈ ವ್ಯವಸ್ಥೆಯೊಳಗೆ ಪ್ರೇಕ್ಷಕನ ಸ್ವಂತ ಅಭಿರುಚಿ, ಸ್ವಂತಿಕೆ ಹಾಗು ರಚನಾಕಾರನ ಅದಮ್ಯ ಸೃಜನಶೀಲತೆಯ ಮಧ್ಯ ಒಂದು ದೊಡ್ಡದಾದ ಕಂದರವೇ ಏರ್ಪಟ್ಟಿದೆ. ಹಾಗೆಂದು ಈ ಕಂದರ ಏರ್ಪಡುವಲ್ಲಿ ಪ್ರೇಕ್ಷಕವರ್ಗದ ಪಾತ್ರ ಸಂಪೂರ್ಣವಾಗಿ ನಗಣ್ಯವೆಂದು ಕೂಡ ಹೇಳಲಾಗುವುದಿಲ್ಲ. ಯಾವಾಗ ಪ್ರೇಕ್ಷಕ ವರ್ಗ ಒಂದು ರೀತಿಯ ಕಳಪೆ ಗುಣಮಟ್ಟದ ಮನೋರಂಜನೆಯನ್ನು ನೆಚ್ಚಿಕೊಳ್ಳುತ್ತಾ ಹೋಗುತ್ತದೋ, ಕಂದರ ಅಷ್ಟೇ ಹಿರಿದಾಗುತ್ತ ಹೋಗುತ್ತದೆ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಕಲಾವಿದರು ಮಾತ್ರ ಕಂದರದ ಮಧ್ಯೆ ಸೇತುವೆ ನಿರ್ಮಾಣ ಮಾಡುವ ಪ್ರಯತ್ನಪಡುತ್ತಾರೆ . ಪ್ರಯತ್ನಕ್ಕೆ ಸರಿಯಾದ ಶ್ಲಾಘನೆ, ಮನ್ನಣೆ ಕೂಡ ಸಿಗದಿರುವುದು ನಮ್ಮ ಚಿತ್ರರಂಗದ ದುರಂತವೇ ಸರಿ.
13 January 2026
ಒಂದು ಕಥೆ ಹೇಗಿರಬೇಕು? ಹೋಟೆಲಿನಲ್ಲಿ ಸುಮ್ಮನೆ ಕುಳಿತು ಆರ್ಡರ್ ಮಾಡಿದಾಗ ಸಿಗುವ ಸಿದ್ಧಪಡಿಸಿಟ್ಟಿದ್ದ ಊಟದಂತೆಯೇ? ಅಥವಾ ಪರಿಕರಗಳನ್ನೆಲ್ಲ ನಮ್ಮ ಮುಂದಿರಿಸಿ ನಮಗಿಷ್ಟವಾದದ್ದನ್ನು ತಯಾರಿಸುವ ಸ್ವಾತಂತ್ರ್ಯ ಕೊಡುವ, ಅಡುಗೆಯನ್ನು ತಯಾರಿಸುವಾಗ ಸಕ್ರಿಯವಾಗಿ ಭಾಗವಹಿಸಿ, ಉಪ್ಪು, ಹುಳಿ, ಖಾರವನ್ನು ನಮ್ಮ ರುಚಿಗೆ ತಕ್ಕಂತೆ ಬೆರೆಸಿ, ಎಲ್ಲರೊಂದಿಗೆ ಕುಳಿತು ಚಪ್ಪರಿಸಿಕೊಳ್ಳುವ ನಮ್ಮ ಮನೆಯದ್ದೇ ಊಟದಂತಿರಬೇಕೇ?
ಉದ್ದೇಶ ಬರಿ ಹಸಿವೆಯನ್ನು ನೀಗಿಸಿಕೊಳ್ಳುವುದು ಮಾತ್ರವಾಗಿದ್ದರೆ, ಸಿದ್ಧ ಊಟ ಒಳ್ಳೆಯ ಆಯ್ಕೆ. ಆದರೆ ಹಸಿವೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ, ನಾಲಿಗೆಯ ಎಲ್ಲಾ ರುಚಿ ರಂಧ್ರಗಳ ಚಪಲಗಳನ್ನು ತೀರಿಸಿ, ಅಡುಗೆಯ ಸೂಕ್ಷ್ಮಗಳನ್ನು ಕೂಡ ಹದವಾಗಿ ಅರಿತುಕೊಳ್ಳುವುದು ನಿಮ್ಮ ಬಯಕೆಯಾಗಿದ್ದರೆ ಎರಡನೇ ಆಯ್ಕೆ ನಿಮ್ಮದಾಗಬೇಕು.
ಹಾಗೆಯೇ ಒಂದು ಉತ್ತಮ ಕಥೆ ಅಥವಾ ಚಿತ್ರದ ಲಕ್ಷಣವಾಗಿರಬೇಕು. ನನ್ನ ಬಳಿ ೩ ಗಂಟೆಯಿದೆ, ಕಳೆಯುವುದು ಹೇಗೆ ಎಂದು ಗೊತ್ತಿಲ್ಲ, ಆ ೩ ಗಂಟೆಗಳಲ್ಲಿ ಬರಿ ಮನೋರಂಜನೆ ಪಡೆದುಕೊಳ್ಳುವುದು ಮಾತ್ರ ನನ್ನ ಉದ್ದೇಶವೆಂದರೆ, ಈಗಾಗಲೇ ಸಿನೆಮಾ ಕ್ಷೇತ್ರದಲ್ಲಿ ದಿನಕ್ಕೆ ೪ ರ ಹಾಗೆ ಬಿಡುಗಡೆಯಾಗುವ ಅನೇಕ ಚಿತ್ರಗಳಿರುತ್ತದೆ. ಅಲ್ಲಿ ಹುಡುಗ ಹುಡುಗಿಯ ಮಧ್ಯೆ ಅಂಕುರಿಸುವ ಪ್ರೀತಿಯಿದೆ, ಅಮ್ಮ ಮಗನ ಮಧ್ಯೆ ಅಪರಿಮಿತ ವಾತ್ಸಲ್ಯವಿದೆ, ಉಲ್ಲಾಸದಿಂದ ಹಾಡುವ ಹಾಡುಗಳಿವೆ, ಉತ್ಸಾಹದಿಂದ ಮಾಡುವ ಕುಣಿತವಿದೆ, ದುಷ್ಟರನ್ನು ವಿಧ ವಿಧವಾಗಿ ಕ್ರೂರ ರೀತಿಯಲ್ಲಿ ಶಿಕ್ಷಿಸುವ ವಿಧಾನಗಳಿವೆ. ಆದರೆ ಎಲ್ಲವು ಸಾಮಾನ್ಯ ನಿಜ ಜೀವನಕ್ಕೆ ಹೋಲಿಕೆಯೇ ಇಲ್ಲದಂತೆ ಅತಿಯಾಗಿದೆ. ಚಪ್ಪಾಳೆ, ಶಿಳ್ಳೆಗಳು ಸರಿ. ಆದರೆ ಮನೆಗೆ ಬಂದ ೨ ದಿನದ ನಂತರವೂ ಕಥೆ ಕಾಡುತ್ತದೆಯೇ?
ನಿರಾಶಾದಾಯಕ ವಿಚಾರವೆಂದರೆ ನಾವು ಅಭಿರುಚಿಗಳನ್ನು ಬೆಳೆಸಿಕೊಳ್ಳುವಲ್ಲಾಗಲಿ, ಒಂದು ಚಿತ್ರದ ಕಥೆಯ, ಕಲೆಯ, ಪಾತ್ರದ, ಅಭಿನಯದ ವೈಚಾರಿಕ ವಿಮರ್ಶೆ ಮಾಡುವ ವಿಚಾರದಲ್ಲಾಗಲಿ, ಕಥೆಗಳ ಮೂಲಕ ನಮ್ಮ ಯೋಚನಾ ಕ್ರಿಯೆಯ ಆಳಕ್ಕೆ ಇಳಿದು, ನಮ್ಮನ್ನು, ನಮ್ಮ ಸುತ್ತದವರನ್ನು, ಸಮಾಜವನ್ನು ಆಳವಾಗಿ ತಿಳಿಯುವ ಆಸಕ್ತಿಯನಾಗಲೀ ಇಟ್ಟುಕೊಂಡಂತಿಲ್ಲ. ಇಲ್ಲವೆಂದಲ್ಲಿ ಏಕಂ ಎಂಬ ಅತ್ತ್ಯುತ್ತಮವಾದ, ಕನ್ನಡದಲ್ಲೇ ಮೊದಲ ಪ್ರಯತ್ನವೆಂಬಂತ ಒಂದು ಉತ್ತಮ ಪ್ರಯತ್ನವನ್ನು ಹೀಗೆ ಸಾರಾಸಗಟಾಗಿ ನಿರಾಕರಿಸುತ್ತಿರಲಿಲ್ಲ. ಎಲ್ಲ OTT ಪ್ಲಾಟ್ಫಾರ್ಮ್ಸ್ ನಿರಾಕರಿಸಿದ ಬೇಜಾರಲ್ಲಿ ನಿರ್ಮಾಪಕರು ತಮ್ಮದೇ ಸ್ವಂತ ವೇದಿಕೆಯಲ್ಲಿ ಅದನ್ನು ಬಿಡುಗಡೆ ಮಾಡುವ ಪ್ರಸಂಗ ಬರುತ್ತಿರಲಿಲ್ಲ.
—–
ಏಕಂ ಎನ್ನುವುದು ೭ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ, ದೇವರ ಮನೆಯಲ್ಲಿ ನಿಧಾನಕ್ಕೆ ಉರಿಯುವ ದೀಪದಂತೆ ಉರಿದು ಅರಿವಿಗೆ ಬೆಳಕು ಮೂಡಿಸುವ ಪ್ರಯತ್ನವನ್ನು ಮಾಡುತ್ತವೆ.
ನನಗೆ ಇದರಲ್ಲಿ ಅತಿಯಾಗಿ ಮನಮುಟ್ಟಿದ ಕಥೆ ‘ಶೂನ್ಯ’ .
ಆತನ ಹೆಸರು ಗುರುವ. ತುಳು ಆತನ ಆಡುಭಾಷೆ. ಬಹುಶ ಬೇರೆ ಭಾಷೆ ಕಲಿಯುವ ಅವಶ್ಯಕತೆ ಆತನಿಗೆ ಎಂದೂ ಬಂದಿರಲಿಲ್ಲವೇನೋ. ಬದುಕುತ್ತಿರುವ ಪರಿಸರದ ಕಾಡೇ ಆತನ ಪ್ರಪಂಚ. ಸುಮಾರು ೭೫ ಗಡಿ ದಾಟಿರುವ ಗುರುವನಿಗೆ, ತನ್ನ ಪ್ರಪಂಚದಲ್ಲಿ ಅಂತಹ ಕುಂದು ಕೊರತೆಗಳೇನು ಇಲ್ಲಿಯ ತನಕ ಗೋಚರಿಸಿದಂತಿಲ್ಲ.
ಕಾಡಿನ ಅನೂಹ್ಯವಾದ ಲೋಕ ಆತನ ನರ ನಾಡಿಗಳಲ್ಲಿ ಹಾಸುಹೊಕ್ಕಂತಿದೆ. ಹಾಗೆಯೇ ತಾನು ಕೂಡ ವಿಶಾಲವಾದ ಕಾಡಿನ ಒಂದು ಭಾಗವೆಂದೇ ಆತನ ನಂಬಿಕೆ. ಕಾಡು, ಪರಿಸರ, ಪ್ರಾಣಿಗಳು, ಪಕ್ಷಿಗಳು ಹಾಗು ತಾನು, ಎಲ್ಲವೂ ಪ್ರಕೃತಿಯ ಭಾಗವೆಂದೇ ತಿಳಿದು ಇಲ್ಲಿಯವರೆಗೆ ಬದುಕು ಸವೆಸಿದವ. ಕಾಡಿನ ಸ್ವರಗಳನ್ನು ಕೇಳಿ, ಕೀಟಗಳ ವರ್ತನೆಗಳನ್ನು ನೋಡಿ, ನೆಲವನ್ನು ಸ್ಪರ್ಶಿಸಿ ಕಾಡಿನ ಸ್ಪಂದನವನ್ನು ತಿಳಿದು, ತನ್ನಅವಶ್ಯಕತೆಗೆ ಬೇಕಾದಷ್ಟನ್ನೇ ಪೃಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬಲ್ಲ ಹೊಣೆಯುಳ್ಳವ. ತನ್ನದೇ ತುಂಬಾ ಸರಳವಾದ ಜಾಲವನ್ನು ಬೀಸಿ ದಿನದ ಊಟಕ್ಕಾಗುವಷ್ಟು ಬೇಟೆಯಾಡಿ ಸರಳ ಜೀವನ ಸಾಗಿಸಿ ತಕ್ಕ ಮಟ್ಟಿಗೆ ತೃಪ್ತಿಯಿಂದಲೇ ಇದ್ದವ .
ಇಂತಹದ್ದರಲ್ಲಿ ಒಂದು ದಿನ ಪಕ್ಕದೂರಿನ ಶ್ರೀಮಂತ ಮನೆಯವರ ಹುಡುಗರು ಹಂದಿಯನ್ನು ಬೇಟೆಯಾಡಲು ಈತನ ಸೂಚನೆ ಸಲಹೆಗಳನ್ನು ಪಡೆಯಬರುತ್ತಾರೆ. ಬೇಟೆ ಮಾಡುವ ಆಸೆಯಿಂದ ಗುರುವ ತಾನು ಕೂಡ ಅವರನ್ನು ಸೇರಬಹುದೇ ಎಂದು ಸಹಜವಾಗಿ ಕೇಳಿದಾಗ, ಬಂದ ಹುಡುಗರು ಆತನನ್ನು ಹೀಯಾಳಿಸುವಂತೆ, ಕೋವಿ ಮುಟ್ಟಿ ಗೊತ್ತಿಲ್ಲದ ನೀನ್ಯಾವ ಸೀಮೆ ಬೇಟೆಗಾರ ಎಂದು ಕಡೆಗಣಿಸಿ ಹೋಗುತ್ತಾರೆ.
ಸ್ವಲ್ಪವೇ ದಿನಗಳಲ್ಲಿ ಗುರುವ ಯಾವ ಧಣಿಗಳ ಜಾಗದಲ್ಲಿ ಗೇಣಿ ಮಾಡಿಕೊಂಡಿದ್ದನೋ, ಅದೇ ಧಣಿ ಆತನನ್ನು ತಾವಿರುವ ಪೇಟೆಗೆ ಕರೆಯಿಸಿಕೊಂಡು ತಮ್ಮ ಹೊಲಗಳನ್ನು ಹಂದಿಯಿಂದ ಹಾಗು ತಮ್ಮ ಪಾಲಿನ ಕಾಡನ್ನು ಕಳ್ಳರಿಂದ ಕಾಪಾಡಲು ಗುರುವನಿಗೆ ಯಾವುದೋ ಒಂದು ಹಳೆಯ ಕೋವಿಯನ್ನು ಒತ್ತಾಯ ಮಾಡಿ ಕೊಡುತ್ತಾರೆ. ಸ್ವಲ್ಪ ಕಳವಳ, ಸ್ವಲ್ಪ ತವಕ, ಮತ್ತೊಂದಿಷ್ಟು ಉತ್ಸುಕತೆಯಿಂದಲೇ ಒಪ್ಪಿಕೊಂಡು ಗುರುವ ಖುಷಿ ಖುಷಿಯಿಂದ ವಾಪಸಾಗುತ್ತಾನೆ. ಬಸ್ಸಿನಲ್ಲಿ ಗುರುವನಿಗೆ ತಾನು ಆಗಲೇ ಕೋವಿ ಹಿಡಿದ ಮಹಾ ಬೇಟೆಗಾರನಾದ ಕನಸು.
ಅಲ್ಲಿಂದ್ ಶುರುವಾಗುತ್ತದೆ ಆತನ ನೆಮ್ಮದಿಯ ನಿಧಾನವಾದ ಅವನತಿ.
ಪ್ರತಿದಿನ ಕೋವಿ ಹಿಡಿದುಕೊಂಡು ಆಗಲೇ ಹಂದಿ ಕಾಟದಿಂದ ಹಾಳಾಗಿರುವ ಗದ್ದೆ ಕಾಯುತ್ತಾನೆ. ಕೋವಿಗೆ ಏನೂ ಆಗದಂತೆ ತನ್ನ ಹೆಗಲಿಗೆ ಅಂಟಿಸಿಕೊಂಡೆ ತಿರುಗಾಡುತ್ತಾನೆ. ನೋಡ ನೋಡುತ್ತಾ ಕೋವಿಯೊಂದಿಗೆ ತನ್ನನ್ನು ಕಲ್ಪಿಸಿಕೊಳ್ಳುತ್ತಾ, ಕಲ್ಪನೆಯಲ್ಲೇ ತನ್ನ ಸ್ಥಾನಮಾನಗಳನ್ನು ಮಹಾ ಬೇಟೆಗಾರನೆಂದು ಏರಿಸಿಕೊಳ್ಳುತ್ತಾನೆ.
ಇನ್ನೊಂದೆಡೆ ಕೋವಿ ಸಂಭಾಳಿಸುವ ಗೋಜಿನಲ್ಲಿ ಆತನ ದಿನ ಬೇಟೆ ನಿಂತು ಹೋಗಿದೆ. ದಿನ ಸಂಜೆ ಬರಿ ಕೈಯಲ್ಲಿ ಮನೆ ಮರುಳತೊಡಗಿದ್ದಾನೆ. ಇಷ್ಟವಿಲ್ಲದೆ ಮನೆ ಮಂದಿ, ಒಮ್ಮೆ ಸಸ್ಯಹಾರವನ್ನು ಇನ್ನೊಮ್ಮೆ ಫಾರ್ಮ್ ಕೋಳಿಯನ್ನು ಊಟಕ್ಕೆ ತಿಂದು ಮನಸ್ಸಿನಲ್ಲೇ ಗುರುವನ ಬದಲಾದ ನಡವಳಿಕೆಗೆ ಶಪಿಸಿ ಮಲಗತೊಡಗಿದ್ದರೆ.
