January 4, 2025

ಜೇಡರ ಬಲೆ

ಕೀಟಗಳು ಬಲೆಗೆ ಬಿದ್ದ ಕೂಡಲೇ ಅವು ಉಂಟು ಮಾಡುವ ಸೂಕ್ಷ್ಮ ಕಂಪನಗಳಿಂದ ಜೇಡರ ಹುಳು ಅವುಗಳ ಮೇಲೆ ಎರಗುತ್ತದೆ. ಆದರೆ ಅವುಗಳನ್ನು ಕಚ್ಚಿ ನಿಷ್ಟಗೊಳಿಸುವ ಮೊದಲು ತಮಗೇನೂ ಅಪಾಯ ಬಾರದಂತೆ ತಮ್ಮ ಸೀಳ ಕಾಲುಗಳಿಂದ ಬಲೆಯ ಮೇಲೆಯ ಅವುಗಳನ್ನು ಗಿರಗಿರ ತಿರುಗಿಸುತ್ತಾ ಅವುಗಳ ನಾಭಿಯಿಂದ ಪ್ರವಾಹದಂತೆ ಹೊಮ್ಮುವ ನೂಲನ್ನು ಕೀಟಗಳು ಅಲ್ಲಾಡದಂತೆ ಸುತ್ತಿಬಿಡುತ್ತವೆ. ಕೀಟ ತೆಳ್ಳನೆ ಬ್ಯಾಂಡೇಜ್ ಬಟ್ಟೆಯಲ್ಲಿ ಸುತ್ತಿದಂತೆ ಕಾಣುತ್ತವೆ. ಕೂಡಲೇ ಮಲೆನಾಡಿನಲ್ಲಿ ಚಿಕ್ಕ ಚಿಕ್ಕ ಪುಟ್ಟ ಕಪ್ಪೆಗಳನ್ನೂ ಹಿಡಿದುಹಾಕಿ ಬಿಡುವಷ್ಟು ದೊಡ್ಡ ದೊಡ್ಡ ಜೇಡಗಳಿದ್ದಾವೆ. ಜೇಡರ ಹುಳುಗಳು ಸಾಧಾರಣವಾಗಿ ಕೀಟಗಳನ್ನು ತಿನ್ನುವುದಿಲ್ಲ. ತಮ್ಮ ಬಾಯಲ್ಲಿ ಉತ್ಪತ್ತಿಯಾಗುವ ಒಂದು ಬಗೆಯ ವಿಶಿಷ್ಟ ವಿಷವನ್ನು ಅದಕ್ಕೆ ಚುಚ್ಚುತ್ತವೆ. ಅದನ್ನು ಚುಚ್ಚಿದ ಕೀಟಗಳ ಒಳಗಿನ ಅಂಗಾಂಗಗಳೆಲ್ಲಾ ಕರಗಿ ಕರಗಿ ದ್ರವವಾಗ ತೊಡಗುತ್ತದೆ. ಅನಂತರ ಜೇಡರ ಹುಳುಗಳು ನಾವು ಎಳನೀರು ಕುಡಿಯುವಂತೆ ಅದನ್ನು ಹೀರಿಬಿಡುತ್ತದೆ. ಜೇಡರ ಬಲೆಗಳಲ್ಲಿ ಕುಬ್ಬವಾಗಿ ಸೆಟೆದುಕೊಂಡು ಈಜಿಪ್ಟಿನ ಮಮ್ಮಿಗಳಂತೆ ಮುರುಟಿದ ಕೀಟಗಳು ಬರಿಯ ಹೊರ ಚಿಪ್ಪು ಮಾತ್ರವಾಗಿ ನೇತಾಡುತ್ತಿರುವುದನ್ನು ನೀವು ನೋಡಬಹುದು.

-ಪೂರ್ಣಚಂದ್ರ ತೇಜಸ್ವಿ (ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು)