13 January 2026

ನಿಧಾನಕ್ಕೆ ಊರವರು, ಮನೆಯವರು ತನ್ನ ಅಸಾಮರ್ಥ್ಯದ ಬಗ್ಗೆ ಒಳಗೊಳಗೇ ಗೇಲಿ ಮಾಡಿಕೊಳ್ಳುತ್ತಿರುವುದು ಗುರುವನಿಗೂ ತಿಳಿಯತೊಡಗಿದೆ.
ಈಗೀಗ ಆತನಿಗೆ ಯಾವ ಬೇಟೆಯಾಡುವುದು ಕೂಡ ಅಸಂಭವವೆನಿಸತೊಡಗಿದೆ. ಯಾವ ಕಾಡು, ಕಾಡಿನ ಸೂಕ್ಷ್ಮ ಶಬ್ದಗಳು ಆತನನ್ನು ಬೇಟೆಯೆಡೆಗೆ ಒಯ್ಯುವ ಮಾರ್ಗದರ್ಶಿಗಳಾಗುತ್ತಿದ್ದವೋ, ಅವೇ ಇಂದು ಆತನ ಏಕಾಗ್ರತೆಗೆ ಅಡಚಣೆಗಳಂತೆ ಪರಿಣಮಿಸುತ್ತಿವೆ. ಒಂದು ಹಂತದಲ್ಲಂತೂ ಹತಾಶೆಯ ಪರಾಕಾಷ್ಠೆಗೆ ತಲುಪಿದವನಂತೆ ಗಾಳಿಯಲ್ಲಿ ಗುಂಡು ಬಿಟ್ಟು ಕಾಡಿನ ಸದ್ದಡಗಿಸಿಬಿಡುತ್ತಾನೆ.
ಇಂಥದ್ದೇ ಒಂದು ರಾತ್ರಿ ಮಧ್ಯದಲ್ಲಿ ಎಚ್ಚರವಾದವನಿಗೆ ಅಲ್ಲೆಲ್ಲೋ ಕಾಡು ಹಂದಿ ಸರಿದಾಡಿದ ಸದ್ದು ಕೇಳಿದೆ. ಆಗಲೇ ವಿಫಲ ಪ್ರಯತ್ನಗಳಿಂದ ಹತಾಶನಾಗಿರುವ ಆತ ಸಿಕ್ಕ ಅವಕಾಶ ಬಿಡಬಾರದೆಂದು ನಿಶ್ಚಯಿಸಿ ಮಧ್ಯ ರಾತ್ರಿಯಲ್ಲಿ ಕೋವಿ ಹಿಡಿದು ಹೊರಟೇ ಬಿಡುತ್ತಾನೆ. ಆಗೋ ಅಲ್ಲಿ ಏನೋ ಸರಿದಾಡಿದಂತೆ ಕಂಡು ಕೋವಿಯಲ್ಲಿ ಗುರಿಯಿಟ್ಟು ಕತ್ತಲೆಯಲ್ಲಿ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಗುಂಡು ಹಾರಿದ್ ಜಾಗಕ್ಕೆ ಬೆಳಕು ಹರಿಸಿ ನೋಡಿದವನು, ತೋರಿದ ದೃಶ್ಯಕ್ಕೆ ಅಲ್ಲೇ ಕುಸಿದು ಕುಳಿತಿದ್ದಾನೆ.
ಗುರುವನಲ್ಲಿ ಇಲ್ಲದಿದ್ದ ಶೂನ್ಯತೆಯನ್ನು ತಾನೇ ಸೃಷ್ಟಿಸಿ, ಅದರೊಳಗೆಯೇ ಆತನನ್ನು ಬೀಳಿಸಿದ ಮನ್ನಣೆ ಸಮಾಜಕ್ಕೆ ಸಿಗುತ್ತದೆ.
——
ಇದನ್ನು ಬರಿ ಒಂದು ಕಥೆಯಂತೆಯೇ ನೋಡಿ ಕೂಡ ಸವಿಯಬಹುದು. ಆದರೆ ಇದೆ ಕಥೆಯ ಮೂಲಕ ಸರಣಿಯ ನಿರ್ಮಾಪಕರು, ಕಣ್ಣಿಗೆ ತೋರುವುದನ್ನು ಮೀರಿ ಸಮಾಜವನ್ನು, ಹಾಗು ತನ್ನನ್ನು ವಿಮರ್ಶಿಸಿಕೊಳ್ಳುವಂತೆ ಪ್ರೇಕ್ಷಕನನ್ನು ಪ್ರೇರೇಪಿಸುತ್ತಾರೆ.
ಹಲವಾರು ಪ್ರಶ್ನೆಗಳು ಈ ಚಿತ್ರ ಕಥೆಯನ್ನು ನೋಡಿದವನ ಮನಸ್ಸಿನಲ್ಲಿ ಮೂಡುತ್ತವೆ.
ಮನುಷ್ಯ ಗುರುವನಂತೆ ಸ್ಥಾಯಿಯಾಗಿ ಜೀವನದಲ್ಲಿ ಸಂತೃಪ್ತಿ ಕಂಡುಕೊಳ್ಳಲು ಸಾಧ್ಯವೇ? ಪ್ರಕೃತಿಯನ್ನು ಅರಿತು, ಅದರೊಂದಿಗೆ ಸಹಬಾಳ್ವೆ ನಡೆಸುವ ಯಾವುದೇ ಮಹತ್ವಾಕಾಂಕ್ಷೆಯಿಲ್ಲದಂತೆ ಬದುಕುವುದು ಸಾಧ್ಯವಾದಲ್ಲಿ ಮನುಷ್ಯನ ಅರ್ಧದಷ್ಟು ಆಧುನಿಕ ಆವಿಷಕಾರಗಳ ಉದ್ದೇಶವೇ ಇಲ್ಲದಂತೆಯೇ. ಇನ್ನಷ್ಟು ಮತ್ತಷ್ಟು ವೇಗವಾಗಿ ಚಲಿಸುವ ಹಾರುವ ವಾಹನಗಳು, ರಸ್ತೆಗಳು, ಮಹಾ ನಗರಗಳು, ಕುಟಿಲ ವ್ಯವಸ್ಥೆಗಳು ಇವ್ಯಾವುದಕ್ಕೂ ಅವಕಾಶಗಳೇ, ಅವಶ್ಯಕತೆಗಳೇ ಇದ್ದಿರುತ್ತಿರಲಿಲ್ಲವೇನೋ.
ಹಾಗೆಯೇ ನಿರ್ಭರವಾಗಿ ಬದುಕುತ್ತಿದ್ದ ಗುರುವನನ್ನು ಕೂಡ ವ್ಯವಸ್ಥೆ ನಿಧಾನಕ್ಕೆ ಭ್ರಷ್ಟನನ್ನಾಗಿ ಮಾಡುತ್ತದೆ. ಕೋವಿಯ ನೆಪದಲ್ಲಿ.
ತಂತ್ರಜ್ಞಾನದ ಆಧಾರದಲ್ಲೇ ಬದುಕುತ್ತಿರಿವ ಹೊಸ ತಲೆಮಾರು ಗುರುವನ ಸ್ವಾಭಾವಿಕ ಜಾಣ್ಮೆಯನ್ನು, ಜ್ಞಾನವನ್ನು ಹೀಗೆಳೆಯುತ್ತದೆ. ತನ್ನ ಪಾಡಿಗೆ ತಾನು ಕಾಡಿನ ಮಧ್ಯೆ ಬದುಕುತ್ತಿದ್ದವ ನಾಡಿಗೆ ಕಾಲಿಟ್ಟ ಕ್ಷಣದಲ್ಲೇ, ಕಲಿತವರ ನಾಡು, ಜಾತಿ, ಅಂತಸ್ತುಗಳ ವಿವಿಧ ಸ್ಥರಗಳ ಮೂಲಕ ಪಕ್ಷಪಾತ ತೋರಿ ಆತನ ಸ್ಥೈರ್ಯವನ್ನು ಇನ್ನಷ್ಟು ಕೆಳ ನೂಕುತ್ತದೆ. ಸಂಭಾವಿತ ವ್ಯವಸ್ಥೆ, ಬೇಟೆಯಲ್ಲಿ ಆತನ ಭಾಗವಹಿಸುವಿಕೆಯನ್ನು ನಿರಾಕರಿಸುತ್ತದೆ, ಆತನನ್ನು ಮನೆಯ ಹೊರಗೆ ನಿಲ್ಲಿಸಿ ಮಾತನಾಡಿಸುತ್ತದೆ, ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತುಕೊಳ್ಳಲು ನಿರಾಕರಿಸುತ್ತದೆ, ಮನಸ್ಸಿನಲ್ಲೇ ಬೈದು ಕೋವಿಯನ್ನು ಹಸ್ತಾಂತರಿಸುತ್ತದೆ.
ಇದ್ದುದರಲ್ಲೇ ಸಂತ್ರಪ್ತಿಯಿಂದ ಬದುಕುತ್ತಿದ್ದ ಗುರುವನ ಮನಸ್ಸಿನಲ್ಲಿ ತನ್ನ ಬಗ್ಗೆಯೇ ಕೀಳರಿಮೆ ಹುಟ್ಟುವಂತೆ ಮಾಡುತ್ತದೆ.
ಇವೆಲ್ಲವುಗಳಿಂದ ಪಾರಾಗುವ ಏಕ ಮಾತ್ರ ಆಶಾ ಕಿರಣವಾಗಿ ಆತನಿಗೆ ಆ ಹಳೆಯ ಕೋವಿ ತೋರುತ್ತದೆ. ಕೋವಿಯೊಂದಿಗೆ ತನ್ನ ಕೌಶಲ ಬೆರೆಸಿ ಮಹಾ ಬೇಟೆಗಾರನಾಗುವುದೊಂದೇ ಸಮಾಜದ ದೃಷ್ಟಿಯಲ್ಲಿ ತಾನು ಮೇಲೇರಬಲ್ಲ ಮೆಟ್ಟಿಲಾಗಿ ತೋರುತ್ತದೆ. ಆಸ್ಥೆಯಿಂದ ಜೋಪಾನ ಮಾಡಿಕೊಂಡು ಬಂದ ಕೋವಿ ನಿಧಾನಕ್ಕೆ ಆತನ ಹೆಗಲನ್ನು, ಜೀವನವನ್ನು, ಕಾಡಿನ ಬಗೆಗಿನ ಜ್ಞಾನವನ್ನು ಸ್ವಲ್ಪ ಸ್ವಲ್ಪವೇ ಘಾಸಿಗೊಳಿಸುತ್ತಾ ಬರುತ್ತದೆ. ಆರೋಗ್ಯಕರವಾದ ದೇಹದ ಒಳಗೆ ನುಗ್ಗಿದ ವೈರಾಣುವಿನಂತೆ. ಹತಾಶನಾದ ಗುರುವನಿಗೆ ಆತನ ಪ್ರೀತಿಯ ಕಾಡು ಗುನುಗಿಸುವ ಶಬ್ದಗಳೇ ಕೊನೆಗೆ ತ್ರಾಸವಾಗಿ, ಬೇಟೆಗೆ ಅಡ್ಡಿಯಾಗಿ , ನೆಮ್ಮದಿಗೆ ಮುಳುವಾಗಿ ಭಾಸವಾಗುತ್ತದೆ.

———

ಸಂದೀಪ್ ಪಿ.ಎಸ್ ಹಾಗು ಸುಮಂತ್ ಭಟ್ ರಚಿಸಿರುವ ಕನ್ನಡದಲ್ಲಿ ಬಂದಿರುವ ವಿಶೇಷವಾದ ಕಥಾ ಸಂಕಲನ ‘ಏಕಂ’. ಕನ್ನಡದಲ್ಲಿ ಇಂತಹ ನಿಧಾನಕ್ಕೆ ಮನಸ್ಸಿನೊಳಕ್ಕೆ ಇಳಿಯುವ ಕಥೆಗಳನ್ನು ಮೆಚ್ಚುವ ಪ್ರೇಕ್ಷಕರು ಇಲ್ಲವೆಂದಲ್ಲ. ಆದರೆ ಜನರನ್ನು ತಲುಪಿಸುವಂತೆ ಮಾಡಲು ನಾವು ಅವಲಂಬಿಸಿರುವ ತಂತ್ರಜ್ಞಾನ ನಿಂತಿರುವುದೇ ಕೆಲವು ಕ್ರಮಾವಳಿ (algorithm) ಮೇಲೆ. ಈ ಕ್ರಮವಾಳಿಗಳ ಏಕೈಕ ಉದ್ದೇಶ ಆರ್ಥಿಕ ಲಾಭ. ಈ ವ್ಯವಸ್ಥೆಯೊಳಗೆ ಪ್ರೇಕ್ಷಕನ ಸ್ವಂತ ಅಭಿರುಚಿ, ಸ್ವಂತಿಕೆ ಹಾಗು ರಚನಾಕಾರನ ಅದಮ್ಯ ಸೃಜನಶೀಲತೆಯ ಮಧ್ಯ ಒಂದು ದೊಡ್ಡದಾದ ಕಂದರವೇ ಏರ್ಪಟ್ಟಿದೆ. ಹಾಗೆಂದು ಈ ಕಂದರ ಏರ್ಪಡುವಲ್ಲಿ ಪ್ರೇಕ್ಷಕವರ್ಗದ ಪಾತ್ರ ಸಂಪೂರ್ಣವಾಗಿ ನಗಣ್ಯವೆಂದು ಕೂಡ ಹೇಳಲಾಗುವುದಿಲ್ಲ. ಯಾವಾಗ ಪ್ರೇಕ್ಷಕ ವರ್ಗ ಒಂದು ರೀತಿಯ ಕಳಪೆ ಗುಣಮಟ್ಟದ ಮನೋರಂಜನೆಯನ್ನು ನೆಚ್ಚಿಕೊಳ್ಳುತ್ತಾ ಹೋಗುತ್ತದೋ, ಕಂದರ ಅಷ್ಟೇ ಹಿರಿದಾಗುತ್ತ ಹೋಗುತ್ತದೆ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಕಲಾವಿದರು ಮಾತ್ರ ಕಂದರದ ಮಧ್ಯೆ ಸೇತುವೆ ನಿರ್ಮಾಣ ಮಾಡುವ ಪ್ರಯತ್ನಪಡುತ್ತಾರೆ . ಪ್ರಯತ್ನಕ್ಕೆ ಸರಿಯಾದ ಶ್ಲಾಘನೆ, ಮನ್ನಣೆ ಕೂಡ ಸಿಗದಿರುವುದು ನಮ್ಮ ಚಿತ್ರರಂಗದ ದುರಂತವೇ ಸರಿ.